Pages

Wednesday, January 29, 2020

ನೀರ ಹೀರುತ್ತ ಕುಳಿತ್ತಿದ್ದೇನೆ

ಕೂತ ಕುರ್ಚಿಯ ಕೆಳಗಿನ
ಮಹಡಿಗಳ ಕಟ್ಟಡದಲ್ಲಿ
ನೀರ ಹೀರಿ ಹರಿಸುತ್ತಿರುವ ಕಾಂಡಗಳು,
ಬೇರುಗಳುದ್ದದ್ದ ಚಾಚಿ
ರಾಜ್ಯರಾಜ್ಯಗಳಿಗೆ ಹೋಗಿ ದಾಖಲೆಗಳನ್ನು ಕೇಳುತ್ತಿವೆ

ಡ್ರೋನುಗಳ ಮುಂದೋಡಿ ತಬ್ಬಿಬ್ಬಾದವರ
ಎದೆಬಡಿತಗಳೊಡನೆ ಕುಣಿದು,
ಹಲ್ಲೆಯಾಗಿ ಮನಸ್ಸೆಲ್ಲ ಮಬ್ಬಾದವರ
ಬಿಸಿಯುಸಿರಿನಲ್ಲಿ ಕುದಿದು,
ಮಕ್ಕಳನ್ನೇ ಮಂಕಾಗಿಸಿದ
ವಾಯುಗುಣದಲ್ಲಿ ತಣಿದು,
ಕಾದಾರಿ ಬಂದಿದೆ

ಪಿತ್ರಾರ್ಜಿತವಾಗಿ ಬಂದಿದೆ

ಕೆಲವರನ್ನು ನಾಲ್ಕಾಗಿಸಿ
ಹಲವರನ್ನು ಹೊಸೆದು
ತಾತಂದಿರ ತಾತಂದಿರು ಬರೆದು

ತಿಳಿದವರು, ನೆರೆಯವರು, ರಕ್ತದವರು
ಕಣ್ಮುಚ್ಚಿ ಕುಡಿದ
ನೀರಿನದ್ದೇ ಒಂದು ಪಾಲು

ಹೀರುತ್ತ ಕುಳಿತಿದ್ದೇನೆ
ನೀರಿನಲ್ಲಿಯ ಮುಖಗಳನ್ನು
ನೋಡದಿರುವಂತೆ
ಕುರ್ಚಿ ಸರಿಸಿಕೊಳ್ಳುತ್ತ

- ಸುಬ್ರಹ್ಮಣ್ಯ ಹೆಗಡೆ

Friday, October 19, 2018




ಸ್ವಲ್ಪವೇ ಸಮಯ..
ಸ್ವಲ್ಪ
ನಾನು ನೀವು
ಮಣ್ಣ ಮೇಲೇ
ನಿಶ್ಯಬ್ದವಾಗುವ.
ಗೋಚರಿಸದ
ಅಲೆ
ಬಾನುಲಿ
ಕೇಳಬೇಕೆನ್ನುವ
ನೋಡಬೇಕೆನ್ನುವ -
ಬೆರಳುಗಳನ್ನು
ಗಂಟಾಗಿಸಿ ಕೂರುವ.
ಗದ್ದಲಗಳ ದೂರಗೊಳಿಸಿದ
ಸ್ವಚ್ಛ ಸಂಕೇತದಲ್ಲಿ
ಒಬ್ಬ ಅಬ್ಬು,
ಒಂದು ಪುಟಾಣಿ ಹುಡುಗಿ,
ಒಬ್ಬ ಕನಸು ಕಣ್ಣಿನ ಯುವಕ,

ನಿದ್ರೆ ಬಾರದಹಾಗೆ,
ಒಂದು ಚಿವುಟು,
ಮುಖತೊಳೆಯುವಿಕೆ,

ತೊಳೆಯುವ ನೀರಿನಲ್ಲಿ;

ಅವಸರದಲ್ಲಿ ರಿಮೋಟು
ಒತ್ತುವುದು ಬೇಡ
ಇಂದು ತಪ್ಪಿದ ಕಾರ್ಯಕ್ರಮ
ನಾಳೆ ಪ್ರಸರಾವಾಗುವುದು ಇದ್ದದ್ದೇ ಇದೆ

ಪ್ರಸಾರವಾಗುವ ಅಲೆಗಳ ನಡುವೆ;

ಕ್ಷೀಣವಾಗಿ,
ಒಬ್ಬ ಅಬ್ಬು,
ಒಂದು ಪುಟಾಣಿ ಹುಡುಗಿ,
ಒಬ್ಬ ಕನಸು ಕಣ್ಣಿನ ಯುವಕ

ಸ್ಪಲ್ಪವೇ ಹೊತ್ತು
ನಿಶ್ಯಬ್ದವಾಗುವ
ನಾನು-ನೀವು
ನಮ್ಮ ಕೈಗಳ ವಾಸನೆಯಲ್ಲಿ
ಇದೇ ಮೂವರು

Saturday, February 25, 2017

ಅಮರತ್ವ


ನಸುಹೊತ್ತು
ನಡೆಯುತ್ತ ಹೊರಟಾಗ
ನೋಡಿದೆ
ಪ್ರೀತಿಸುತ್ತಿದ್ದವು
ನಾಯಿಗಳೆರಡು
ರಸ್ತೆಮಧ್ಯದಲ್ಲೇ ಸ್ವಚ್ಛಂದ

ಪ್ರಾಣಿ ಮಾತ್ರ

ನಡೆಸಬಲ್ಲವು ಹೀಗೆ
ರಸ್ತೆಯ ನಡುಮಧ್ಯ

‍ಸಿಕ್ಕಿದ್ದೆಲ್ಲ ಹೆಕ್ಕುವ,
ಅಂಡಲೆಯುವ
ಎಲುಬು ತಿಂದು
ಇಂದಲ್ಲ ನಾಳೆ
ಎಲುಬಾಗುವಂತಹವುಗಳ
ಮೀರಿ ಅಮರರಾಗಬೇಕಂದರೆ

ರಸ್ತೆಯಲ್ಲಿ ಪ್ರೇಮವನ್ನು
ನಿಷೇಧಿಸುವ ಶಾಸನಗಳನ್ನು ಬರೆಯಬೇಕು.